ಭಾಷ್ಯಂ ಭಾಷ್ಯಾಚಾರ್ಯ	
	1833-84. ಖ್ಯಾತ ಪತ್ರಿಕೋದ್ಯಮಿ ಮತ್ತು ವಿದ್ವಾಂಸ. ತಂದೆ ಭಾಷ್ಯಂ ತಿರುಮಲಾಚಾರ್ಯ. ಜನನ 1833. ಬೆಂಗಳೂರು ವೆಸ್ಲಿಯನ್ ಮಿಷನ್ ಸ್ಕೂಲಿನಲ್ಲೂ ಅನಂತರ ಮದರಾಸಿನ ಪ್ರೌಢಶಾಲೆಯೊಂದರಲ್ಲೂ ವ್ಯಾಸಂಗ ಮುಗಿಸಿ ಚತುರ್ವೇದಿ ಶ್ರೀನಿವಾಸಾಚಾರ್ಯದಲ್ಲಿ ಸಂಸ್ಕøತ ಅಧ್ಯಯನ ಮಾಡಿದರು. ಕನ್ನಡ, ತೆಲುಗು, ತಮಿಳು ಭಾಷೆಗಳ ಸಾಹಿತ್ಯವನ್ನು ಅಭ್ಯಾಸ ಮಾಡಿದರು. ಮರಾಠೀ, ಇಂಗ್ಲೀಷ್, ಪರ್ಷಿಯನ್ ಮತ್ತು ಉರ್ದು ಭಾಷೆಗಳನ್ನೂ ಬಲ್ಲವರಾಗಿದ್ದರು. ರಾಷ್ಟ್ರೀಯವಾದಿಯಾಗಿದ್ದ ಇವರು ಸಾರ್ವಜನಿಕ ಜೀವನವನ್ನು ಉತ್ತಮಗೊಳಿಸಲು ಮತ್ತು ಜನತೆಯಲ್ಲಿ ಸ್ವಾತಂತ್ರ್ಯ ಪ್ರಜ್ಞೆ ಮೂಡಿಸಲು ತಮ್ಮ 26ನೆಯ ವಯಸ್ಸಿನಲ್ಲಿ (1859 ಜುಲೈ) ಮೈಸೂರು ಸಂಸ್ಥಾನದ ಮೊದಲ ಕನ್ನಡ ವಾರಪತ್ರಿಕೆ ಮೈಸೂರು ವೃತ್ತಾಂತ ಬೋಧಿನಿಯನ್ನು ಆರಂಭಿಸಿದರು. ಭಾಷ್ಯಾಚಾರ್ಯರ ಮನೆ ವಿದ್ವಾಂಸರ, ಕಲಾವಿದರ, ರಾಜಕಾರಣಿಗಳ, ಸ್ವಾತಂತ್ರ್ಯ ಪ್ರೇಮಿಗಳ ಭೇಟಿಯ ಸ್ಥಾನವಾಗಿತ್ತು ಮತ್ತು ಪತ್ರಿಕಾ ಕಚೇರಿಯೂ ಆಗಿತ್ತು.

	ದೇಶಭಾಷಾ ಪತ್ರಿಕೆಗಳಿಗೆ ಉತ್ತೇಜನವಿಲ್ಲದ ಆ ಕಾಲದಲ್ಲಿ, ಬ್ರಿಟಿಷ್ ಆಳರಸರ ದುರಾಗ್ರಹಕ್ಕೆ ಪಾತ್ರರಾಗಿದ್ದ ಪರಿಸ್ಥಿತಿಯಲ್ಲಿ ಮುಮ್ಮಡಿ ಕೃಷ್ಣರಾಜ ಒಡೆಯರ್ ಅವರು ಭಾಷ್ಯಂ ಭಾಷ್ಯಾಚಾರ್ಯರ ಮೈಸೂರು ವೃತ್ತಾಂತ ಬೋಧಿನಿ ಪತ್ರಿಕೆಯ ಪ್ರಕಟನೆಗೆ ಧನಸಹಾಯ ನೀಡಿ ಪ್ರೋತ್ಸಾಹಿಸಿದರು. ರಾಜರಿಂದ ಧನಸಹಾಯ ಪಡೆಯುತ್ತಿದ್ದರೂ ಪತ್ರಿಕೆ ತನ್ನ ಸ್ವತಂತ್ರ ನಿಲುವನ್ನು ಉಳಿಸಿಕೊಂಡಿತ್ತು. ಸುಮಾರು ಆರು ವರ್ಷಗಳ ಕಾಲ ಈ ಪತ್ರಿಕೆ ನಡೆದು ಜನಮನದ ಮೇಲೆ, ರಾಜ್ಯದ ರಾಜಕೀಯ, ಆರ್ಥಿಕ ಮತ್ತು ಸಾಮಾಜಕ ನೀತಿಯ ಮೇಲೆ ಸಾಕಷ್ಟು ಪ್ರಭಾವ ಬೀರಿತ್ತು.

	ಭಾಷ್ಯಾಚಾರ್ಯರು ತಮ್ಮ ತಂದೆ ತಿರುಮಲಾಚಾರ್ಯರು (1865) ಆರಂಭಿಸಿದ್ದ ಕರ್ಣಾಟಕ ಪ್ರಕಾಶಿಕಾ ಪತ್ರಿಕೆಯನ್ನು ಅವರ ನಿಧನದ ಅನಂತರ 1877ರಲ್ಲಿ ತಾವೇ ವಹಿಸಿಕೊಂಡು ಕೆಲವು ಕಾಲ ನಡೆಸಿದರು. 1866ರಲ್ಲಿ ಮೈಸೂರು ಸರ್ಕಾರ ಗೆಜೆಟ್ ಪ್ರಕಟಣೆಯನ್ನು ಆರಂಭಿಸಿದಾಗ ಭಾಷ್ಯಂ ಭಾಷ್ಯಾಚಾರ್ಯರು ಕನ್ನಡ ಅನುವಾದಕರಾಗಿ ನೇಮಕಗೊಂಡರು.

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ